ಛತ್ರಿ

	ಮಳೆಯ ಹೊಡೆತದಿಂದ ರಕ್ಷಿಸಿಕೊಳ್ಳಲು ಇರುವಂಥ ಒಂದು ಕೈ ಸಾಧನ (ಅಂಬ್ರೆಲ). ಬಿಸಿಲಿನ ಬವಣೆಯಿಂದಲೂ ರಕ್ಷಿಸಿಕೊಳ್ಳಲು ಇದು ನೆರವಾಗುತ್ತದೆ. ಈ ಕಾರಣಕ್ಕೆಂದೇ ಛತ್ರಿಯನ್ನು ಉಪಯೋಗಿಸುತ್ತಿದ್ದುದರ ಬಗ್ಗೆ ಉಲ್ಲೇಖಗಳು ಪ್ರಾಚೀನ ಈಜಿಪ್ಟ್ ಮತ್ತು ಅಸ್ಸೀರಿಯದ ಪ್ರಾಚೀನ ರಾಜಧಾನಿ ನಿನವ-ಇವುಗಳ ಇತಿಹಾಸದಲ್ಲಿ ಕಾಣಬರುತ್ತವೆ. ಈಜಿಪ್ಟಿನ ಪ್ರಾಚೀನ ದೊರೆಗಳು ಛತ್ರಿಯಡಿಯಲ್ಲಿ ಸಿಂಹಾಸನಾರೂಢರಾಗಿರುವ ಅಂಶ ಪ್ರಾಚೀನ ಈಜಿಪ್ಷಿಯನ್ ಕಲೆಯಲ್ಲಿ ನಿರೂಪಿತವಾಗಿದೆ. ದೂರ ಪ್ರಾಚ್ಯ ಮುಂತಾದ ದೇಶಗಳಿಂದ ಛತ್ರಿಯನ್ನು ಕುರಿತಂತೆ ಸ್ವಾರಸ್ಯಕರ ವಿಚಾರಗಳು ತಿಳಿದುಬಂದಿವೆ. ರಾಜಮನೆತನದವರು ಮತ್ತು ಉನ್ನತ ಅಧಿಕಾರದಲ್ಲಿರುವವರು ಮಾತ್ರ ಛತ್ರಿಯನ್ನು ಬಳಸಬಹುದಾಗಿತ್ತು.

	ಯೂರೋಪಿನಲ್ಲಿ ಛತ್ರಿಯನ್ನು ಬಳಕೆಗೆ ತಂದ ಖ್ಯಾತಿ ಗ್ರೀಕರಿಗೆ ಸಲ್ಲುತ್ತದೆ. ಉತ್ಸವದ ದಿವಸಗಳಲ್ಲಿ ದೊಡ್ಡ ದೊಡ್ಡ ಛತ್ರಿಗಳನ್ನು ಉಪಯೋಗಿಸುತ್ತಿದ್ದರ ಬಗ್ಗೆಯೂ ತಿಳಿದುಬಂದಿದೆ. ಬಿಸಿಲಿನ ಬೇಗೆಯಿಂದ ರಕ್ಷಣೆ ಪಡೆಯಲು, ಅಂದರೆ ನೆರಳನ್ನೀಯುವ ಒಂದು ಸಾಧನವಾಗಿ ಇದರ ಬಳಕೆ ಮೊದಲಿಗೆ ಇತ್ತು. ರೋಮನ್ನರು ಬಳಸುತ್ತಿದ್ದ. ಛತ್ರಿಗೂ ಗ್ರೀಕರ ಛತ್ರಿಗೂ ಅಂಥ ವ್ಯತ್ಯಾಸವೇನೂ ಇರಲಿಲ್ಲ. ಮಳೆಯ ಹೊಡೆತದಿಂದ ರಕ್ಷಿಸಿಕೊಳ್ಳಲು ಛತ್ರಿಯನ್ನು ಬಳಸಿದವರಲ್ಲಿ ರೋಮನ್ನರೇ ಮೊಟ್ಟಮೊದಲಿಗರೆನ್ನಲಾಗಿದೆ. 12ನೆಯ ಶತಮಾನದ ಪ್ರಾರಂಭದಲ್ಲಿ ಚೀನೀಯರು ಬಿಸಿಲಿನ ಮರೆಗಾಗಿ ಛತ್ರಿಗಳನ್ನು ಬಳಸುತ್ತಿದ್ದುದು ತಿಳಿದುಬಂದಿದೆ. ಚೀನೀ ಸ್ತ್ರೀಯರು ಉಪಯೋಗಿಸುತ್ತಿದ್ದ ಛತ್ರಿಗೆ ಪ್ಯಾರಾಸೋಲ್ ಎಂದು ಕರೆಯುತ್ತಿದ್ದರು. ಇಂಥ ಛತ್ರಿಗಳು ಚಿಕ್ಕವಾಗಿಯೂ ಹಗುರವಾಗಿಯೂ ಇರುತ್ತಿದ್ದುವು. ಉಡುಪಿಗೆ ಸರಿಹೊಂದುವಂಥ ವಿವಿಧ ವರ್ಣದ ಛತ್ರಿಗಳನ್ನು ರೋಮನ್ನರು ಮತ್ತು ಜಪಾನೀಯರು ಬಳಸುತ್ತಿದ್ದುದುಂಟು. ಇಂಥ ಛತ್ರಿಗಳನ್ನು ಪ್ರಪಂಚದ ಹಲವಾರು ಕಡೆ ಇಂದೂ ಬಳಸುವುದಿದೆ. ಉಡುಪಿನಲ್ಲಿ ವೈವಿಧ್ಯ ಕಂಡುಬಂದಂತೆಲ್ಲ ಛತ್ರಿಯ ವಿನ್ಯಾಸದಲ್ಲೂ ವೈವಿಧ್ಯ ಕಂಡುಬರುತ್ತಿದೆ.

	ಮಧ್ಯಯುಗದಲ್ಲಿ ಛತ್ರಿಯ ಬಳಕೆ ಹೆಚ್ಚಾಗಿರಲಿಲ್ಲ. 16ನೆಯ ಶತಮಾನದ ಉತ್ತರಾರ್ಧದಲ್ಲಿ ಅದು ಮತ್ತೆ ಬಳಕೆಗೆ ಬಂದದ್ದು ಇಟಲಿಯಲ್ಲಿ, ಪೋಪ್‍ನಂಥ ಧರ್ಮಾಧಿಪತಿಗಳ ಸ್ಥಾನಮಾನ ಮತ್ತು ಅಧಿಕಾರದ ಸಂಕೇತವಾಗಿಯೂ ಛತ್ರಿಯನ್ನು ಬಳಸುವುದಿತ್ತು. 17ನೆಯ ಶತಮಾನದಲ್ಲಿ ಬಳಕೆಯಲ್ಲಿದ್ದ ಛತ್ರಿಗಳು ಬಹಳ ಭಾರವಾಗಿದ್ದುವಲ್ಲದೆ ನೋಡಲೂ ಅಷ್ಟೇನೂ ಅಂದವಾಗಿರುತ್ತಿರಲಿಲ್ಲ. ಛತ್ರಿಯ ಮೇಲ್ಭಾಗದ ಹೊದಿಕೆ ಚರ್ಮದ್ದಾಗಿರುತ್ತಿತ್ತು. ಇಂಥ ಛತ್ರಿಯನ್ನು ಇಬ್ಬರು ಹೊತ್ತುಕೊಂಡು ಹೋಗಬೇಕಾಗುತ್ತಿತ್ತು. ಆದ್ದರಿಂದ ಛತ್ರಿಗೆ ಅಷ್ಟಾಗಿ ಬೇಡಿಕೆ ಇರಲಿಲ್ಲ. ಕಾಲಕ್ರಮೇಣ ಬಟ್ಟೆಯನ್ನು ಹೊದಿಕೆಯನ್ನಾಗಿ ಮಾಡಿ ಕೀಲುಕಡ್ಡಿಗಳಿಗೆ ತಂತಿಯನ್ನು ಬಳಸಲು ಪ್ರಾರಂಭಿಸಿದ ಮೇಲೆ ಹಗುರ ಛತ್ರಿಗಳಿಗೆ ಬೇಡಿಕೆ ಹೆಚ್ಚಾಯಿತು. ಉಕ್ಕಿನ ಕಡ್ಡಿಗಳನ್ನು ಮೊಟ್ಟಮೊದಲಿಗೆ 1850ರಲ್ಲಿ ಉಪಯೋಗಿಸುತ್ತಿದ್ದು ತಿಳಿದುಬಂದಿದೆ. 18ನೆಯ ಶತಮಾನದಲ್ಲಿ ಇಟಲಿ, ಫ್ರಾನ್ಸ್, ಬ್ರಿಟನ್, ಜರ್ಮನಿ ಮತ್ತು ನೆದರ್‍ಲೆಂಡ್ಸ್‍ಗಳಲ್ಲಿ ಛತ್ರಿಯ ಬಳಕೆ ಸಾಕಷ್ಟಿತ್ತು.

	ಜಪಾನಿನಲ್ಲಿ ಅಲ್ಲಿನ ಗೇಷಾ ಯುವತಿಯರು ವೈವಿಧ್ಯಮಯ ಛತ್ರಿಗಳನ್ನು ಬಳಸುತ್ತಾರೆ.

	ಭಾರತದಲ್ಲಿ ಛತ್ರಿಯ ಬಳಕೆಯನ್ನು ಕುರಿತಂತೆ ಅನೇಕ ಸಾಕ್ಷ್ಯಾಧಾರಗಳು ಸಿಕ್ಕುತ್ತವೆ. ಪುರಾಣಗಳ ಕಾಲದಲ್ಲಿ ಚಕ್ರವರ್ತಿಗಳು ರಾಜಮಹಾರಾಜರುಗಳು ಶ್ವೇತಚ್ಛತ್ರಸಹಿತವಾದ ಸಿಂಹಾಸನಾರೂಢರಾಗಿರುತ್ತಿದ್ದುದರ ಬಗ್ಗೆ ಉಲ್ಲೇಖಗಳು ಹೇರಳವಾಗಿವೆ. ಧಾರ್ಮಿಕ, ಸಾಂಸ್ಕøತಿಕ ಮತ್ತು ಉತ್ಸವಗಳಲ್ಲಂತೂ ಅಲಂಕೃತ ಛತ್ರಿಗಳನ್ನು ಉಪಯೋಗಿಸುವುದು ಇಂದಿಗೂ ವಾಡಿಕೆ. ಕಂಚಿ, ಶ್ರೀರಂಗ, ಮಧುರೆ ಮುಂತಾದ ಯಾತ್ರಾಸ್ಥಳಗಳಲ್ಲಿ ದೇವರ ಉತ್ಸವಗಳ ಸಮಯದಲ್ಲಿ ಪಟ್ಟೆಪಟ್ಟೆಯ ಬಣ್ಣದ ಬಟ್ಟೆಯನ್ನು ಹೊದಿಸಿರುವ ದೊಡ್ಡ ದೊಡ್ಡ ವರ್ತುಳಾಕಾರದ ಛತ್ರಿಯನ್ನು ಉತ್ಸವದ ಮುಂಭಾಗದಲ್ಲಿ ಹಿಡಿದು ಹೋಗುವುದಿದೆ. ಕೆಲವೊಂದು ಉತ್ಸವ ಸಂದರ್ಭಗಳಲ್ಲಿ ಸಾಮಾನ್ಯ ಕೊಡೆಯನ್ನೇ ಹೋಲುವ ಆದರೆ ಕಿಂಕಾಪು ಬಟ್ಟೆಯನ್ನು ಹೊದಿಸಿ, ದಿವ್ಯರತ್ನಗಳನ್ನೂ ರೇಷ್ಮೆಯ ಕುಚ್ಚನ್ನೂ ಕಟ್ಟಿರುವ ಛತ್ರಿಗಳ ಉಪಯೋಗ ಉಂಟು. ವಾರಾಣಸಿ ಮುಂತಾದ ಸ್ಥಳಗಳಲ್ಲಿ ಕೆಲವು ಆಸ್ತಿಕಜನ ಗರಿ, ಅಡಕೆಪಟ್ಟೆಗಳಿಂದ ಮಾಡಿದ ದುಂಡನೆಯ ಛತ್ರಿಗಳನ್ನು ಬಳಸುವುದು ರೂಢಿಯಲ್ಲಿದೆ. ಇಂಥವನ್ನು ವಾರಾಣಸಿ ಕೊಡೆ, ಬನಾರಸ್ ಕೊಡೆ, ಕಾಶಿ ಕೊಡೆ ಎನ್ನುತ್ತಾರೆ. ಮಳೆ ಹೆಚ್ಚಾಗಿರುವ ಮಲೆನಾಡು ಪ್ರದೇಶಗಳಲ್ಲಿ ಓಲೆಗರಿಯ ಛತ್ರಿಗಳು ಇಂದಿಗೂ ಬಳಕೆಯಲ್ಲಿವೆ. ಅಜಂತದ ಗುಹಾ ದೇವಾಲಯಗಳಲ್ಲಿ ಕಂಡುಬರುವ ರಾಜಕುಮಾರ ರಾಜಕುಮಾರಿಯರ ಚಿತ್ರಗಳಲ್ಲಿ ಛತ್ರಿಯನ್ನು ಚಿತ್ರಿಸಿದ್ದಾರೆ. ಹಳೇಬೀಡಿನ ಹೊಯ್ಸಳ ಶಿಲ್ಪವೊಂದರಲ್ಲಿ (ನೃತ್ಯಸರಸ್ವತಿ) ಛತ್ರಿಯನ್ನು ಬಿಡಿಸಲಾಗಿದೆ.

	ಇತ್ತೀಚೆಗೆ ನಾಗರಿಕತೆ, ಸಂಸ್ಕøತಿ, ಆಚಾರ, ವ್ಯವಹಾರಗಳಲ್ಲಿ ಬದಲಾವಣೆ ಕಂಡುಬಂದು ಪರಿಸರಕ್ಕೆ ಹೊಂದುವಂಥ ಛತ್ರಿಗಳ ನಿರ್ಮಾಣ ಆಗಿದೆ. ಉಪಾಹಾರಗೃಹಗಳು, ಸಮುದ್ರತೀರದ ವಿಹಾರಸ್ಥಳಗಳು-ಇವೇ ಮುಂತಾದ ಸ್ಥಳಗಳಲ್ಲಿ ಬಳಸುವ ಛತ್ರಿಗಳು ದೊಡ್ಡವಾಗಿ ನಯನ ಮನೋಹರವಾಗಿರುತ್ತವೆ. ಮಕ್ಕಳಿಗೆಂದೇ ಮಾಡಿರುವ ಬಣ್ಣಬಣ್ಣದ ಹಾಗೂ ಬೇರೆಬೇರೆ ಕೈಪಿಡಿಗಳಿರುವ ಛತ್ರಿಗಳು ಬಳಕೆಯಲ್ಲಿವೆ. ತೀರ ಹಗುರವಾದ ಮತ್ತು ಮಡಿಸಿ ಕಿಸೆಯಲ್ಲಿಡಬಹುದಾದಂಥ ಛತ್ರಿಗಳೂ ಉಂಟು. ಅಭಿರುಚಿಗೆ ತಕ್ಕಂತೆ ಛತ್ರಿಗಳ ನಿರ್ಮಾಣವೂ ನಡೆಯುತ್ತಲಿದೆ. ಜನಸಾಮಾನ್ಯರು ಉಪಯೋಗಿಸುವ ಛತ್ರಿಗಳಲ್ಲಿ ಕಪ್ಪುಬಟ್ಟೆಯ ಹೊದಿಕೆ ಹಾಕಿರುವ ಛತ್ರಿಗಳೇ ಹೆಚ್ಚು. ಲಂಡನ್, ಗ್ಲಾಸ್ಗೋ, ಮ್ಯಾಂಚೆಸ್ಟರ್, ಪ್ಯಾರಿಸ್ ಮತ್ತು ಲಯನ್ಸ್‍ಗಳಲ್ಲಿ ಛತ್ರಿಯನ್ನು ಹೆಚ್ಚಾಗಿ ತಯಾರಿಸುವುದಿದೆ. ಈಚೆಗೆ ಭಾರತ ಛತ್ರಿಗಳ ಬಗ್ಗೆ ತಾನೇ ತನ್ನ ಅಗತ್ಯಗಳನ್ನು ಪೂರೈಸುತ್ತಿದೆ.
(ಡಿ.ಜಿ.)
	
ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ